ಚಟ್ಟೋಪಾಧ್ಯಾಯ, ಬಂಕಿಮಚಂದ್ರ

	1838-94. ಬಂಗಾಳಿ ಭಾಷಾ ಸಾಹಿತ್ಯಗಳ ನವೋದಯ ಕಾಲದ ಪ್ರಮುಖ ಸಾಹಿತಿಗಳಲ್ಲಿ, ಚಿಂತಕರಲ್ಲಿ ಒಬ್ಬ. ತನ್ನ ಕಾದಂಬರಿಗಳಿಂದಲೂ ವಿಚಾರ ಸಾಹಿತ್ಯದಿಂದಲೂ ಬಹು ಜನಪ್ರಿಯನೆನಿಸಿದವ. ಪ್ರಸಿದ್ಧ ದೇಶಭಕ್ತಿ ಗೀತೆಯೆನಿಸಿದ ವಂದೇ ಮಾತರಂನ ಕರ್ತೃ. ಈತನ ಅನೇಕ ಕೃತಿಗಳು ಕನ್ನಡಕ್ಕೆ ಅನುವಾದವಾಗಿದೆ. ಸರ್ಕಾರದ ಕೈಕೆಳಗೆ ಡೆಪ್ಯುಟಿ ಕಲೆಕ್ಟರ್ ಆಗಿದ್ದ ಯಾದವಚಂದ್ರ ಚಟ್ಟೋಪಾಧ್ಯಾಯನ ನಾಲ್ಕು ಗಂಡು ಮಕ್ಕಳಲ್ಲಿ ಈತ ಮೂರನೆಯವ. ಬಾಲ್ಯದಿಂದಲೂ ಅಸಾಧಾರಣ ಶಕ್ತಿಗಳಿಂದ ಕೂಡಿದ ಮೇಧಾವಂತನೆನಿಸಿಕೊಂಡಿದ್ದ. ಪಾಠಶಾಲೆಗೆ ಸೇರಿದ ದಿನವೇ ವರ್ಣಮಾಲೆಯ ಅಕ್ಷರವೆಲ್ಲವನ್ನೂ ಈತ ಕಲಿತುಬಿಟ್ಟನಂತೆ. ಪರೀಕ್ಷೆಗಳಲ್ಲಿ ಮೊದಲನೆಯ ದರ್ಜೆಯಲ್ಲಿ ತೇರ್ಗಡೆಹೊಂದಿ 1859ರಂದು ಈತ ಬಿ.ಎ. ಪದವೀಧರನಾದ. ಕೂಡಲೇ ಡೆಪ್ಯುಟಿ ಕಲೆಕ್ಟರನ ಹುದ್ದೆ ಲಭಿಸಿತು. ಸರ್ಕಾರದ ನಾನಾ ಇಲಾಖೆಗಳಲ್ಲಿ ಅಧಿಕಾರಿಯಾಗಿ ಹತ್ತು ಹನ್ನೊಂದು ಊರುಗಳಲ್ಲಿ ದಕ್ಷತೆಯಿಂದ ಕೆಲಸಮಾಡಿದ. ಮ್ಯಾಜಿಸ್ಟ್ರೇಟ್ ಪದವಿಯಲ್ಲಿದ್ದಾಗಿನ ಈತನ ಚಾಕಚಕ್ಯತೆ ಜನ ಅದ್ಭುತ ಕತೆ ಕಟ್ಟುವಷ್ಟು ಎತ್ತರದ್ದಾಗಿತ್ತು. 1869ರಂದು ಬಿ.ಎಲ್. ಪರೀಕ್ಷೆಯಲ್ಲಿ ಉತ್ತೀರ್ಣವಾದ. ಆ ಕಾಲದಲ್ಲಿ ವಿದೇಶೀ ಮೇಲಾಧಿಕಾರಿಗಳ ದುರಹಂಕಾರ ಮಿತಿ ಮೀರಿತ್ತೆಂದು ಹೇಳಬೇಕಾದ್ದಿಲ್ಲ. ಬಂಕಿಮನೆಂದೂ ಅದಕ್ಕೆ ಅಂಜಿ ಬಗ್ಗುತ್ತಿರಲಿಲ್ಲ. ನ್ಯಾಯಪರತೆಯಿಂದಲೂ ನಿರ್ದಾಕ್ಷಿಣ್ಯವಾಗಿಯೂ ಈತ ಜನಸೇವೆ ಮಾಡಿದ. 1891ರಲ್ಲಿ ತನ್ನನ್ನು ನಿವೃತ್ತಿ ಮಾಡಬೇಕೆಂದು ಕೇಳಿಕೊಂಡಾಗ ಸರ್ಕಾರ ಅನುಮತಿ ನೀಡಲಿಲ್ಲ; ಖುದ್ದಾಗಿ ಲೆಫ್ಟಿನೆಂಟ್ ಗವರ್ನರನನ್ನು ಭೇಟಿಮಾಡಿ ಗ್ರಂಥ ಬರೆಯಲು ತನಗೆ ಅವಕಾಶ ಅಗತ್ಯವೆಂದು ವಿವರಿಸಿ, ಚಾಕರಿಯಿಂದ ವಿಶ್ರಾಂತವಾದ. ಈತನಿಗೆ ದತ್ತವಾದ ರಾಯ್‍ಬಹುದ್ದೂರ್, ಸಿ.ಐ.ಇ., ಪ್ರಶಸ್ತಿ ಸರ್ಕಾರಕ್ಕೆ ಈತನನ್ನು ಕುರಿತು ಇದ್ದ ಗೌರವದ ಕುರುಹು. ನಿಜಕ್ಕೂ ಮೊದಲ ಮೂರು ವರ್ಷಗಳಲ್ಲಿ ಇವನಿಂದ ಹೆಚ್ಚಿನ ಕೃತಿರಚನೆ ಏನೂ ನಡೆಯಲಿಲ್ಲ. ಆದರೂ ಉದ್ಗ್ರಂಥಗಳನ್ನು ವಿರಚಿಸುವ ಮಹೋದ್ದೇಶ ಇವನಲ್ಲಿ ತುಂಬಿಕೊಂಡಿತ್ತು. ವಯಸ್ಸು, ಐವತ್ತಾರು ಪೂರೈಸುವುದರೊಳಗೇ ತನ್ನನ್ನು ಸಿಹಿಮೂತ್ರವ್ಯಾಧಿ ಪರಲೋಕಕ್ಕೆ ಕಂಡೊಯ್ಯುತ್ತದೆಂದು ಬಹುಶಃ ಈತ ಊಹಿಸಿರಲಿಲ್ಲ. ಹಿಂದೆಯೇ ಕೆಲಸಕಾರ್ಯದ ನಡು ನಡುವೆ ಹೇಗೊ ಬಿಡುವು ಗಳಿಸುತ್ತ ಕಾದಂಬರಿ ಕಥೆ ಪ್ರಬಂಧ ವಿಮರ್ಶೆ ಮುಂತಾದ ಸಾಹಿತ್ಯವನ್ನು ಅಲ್ಪ ಪ್ರಮಾಣದಲ್ಲಿ ಬರೆದು ಮುಗಿಸಿದ್ದ; ಅದು ವಂಗದೇಶದ ಪುಣ್ಯ ಭಾರತದ ಪುಣ್ಯ, ಓದುಗ ಪ್ರಪಂಚದ ಪುಣ್ಯ. ಬಂಕಿಮಚಂದ್ರನಿಗೆ ಎರಡು ಬಾರಿ ವಿವಾಹವಾಗಿತ್ತು. ಹನ್ನೊಂದನೆಯ ವರ್ಷದಲ್ಲಿ ಐದು ವರ್ಷದ ಬಾಲಿಕೆಯೊಡನೆ ಮೊದಲನೆಯದು; ಅವಳ ಹದಿನಾರನೆಯ ವಯಸ್ಸಿನಲ್ಲಿ ಅವಳಿಗೆ ಸಾವು. ಆಮೇಲೆ ಎರಡನೆಯ ಮದುವೆ; ಆ ದಾಂಪತ್ಯದಲ್ಲಿ ಮೂವರು ಹೆಣ್ಣುಮಕ್ಕಳ ಉದಯ.

ಭಾಷೆ ಸಾಹಿತ್ಯ ಸಂಸ್ಕøತಿಗಳ ಚರಿತ್ರೆಯ ದೃಷ್ಟಿಯಿಂದ ಬಂಕಿಮಚಂದ್ರನ ಕೃತಿಚಕ್ರಕ್ಕೆ ಇರುವ ಹಿರಿಮೆಯೂ ಪ್ರಭಾವವೂ ಅದರ ಆಂತರಿಕ ಘನತೆಗಿಂತ ಏನೇನೂ ಕಡಮೆಯಾದದ್ದಲ್ಲ. 1860ರ ಸುಮಾರಿನಲ್ಲಿ ಪ್ಯಾರೀಚಾಂದ ಮಿತ್ರ, ಈಶ್ವರಚಂದ್ರ ಗುಪ್ತ, ದೀನಬಂಧು ಮಿತ್ರರೇ ಆದಿಯಾಗಿ ಕೆಲವರು ಬಂಗಾಳಿಯನ್ನು ತಮ್ಮ ಮಾಧ್ಯಮವಾಗಿ ಬಳಸಿಕೊಂಡರೂ ಅದನ್ನು ಕಂಡರೆ ಅವರಿಗೆ ಮುರುಕ, ಅನುಗ್ರಹ ಬುದ್ಧಿ. ಇತರರಿಗೋ ಅದು ಕೇವಲ ಗ್ರಾಮ್ಯ, ಒರಟು ಮಾತು. ಇಂಗ್ಲಿಷು ವ್ಯಾಮೋಹಬದ್ಧರಿಗಂತೂ ಅದು ಬೇರೆಯಲ್ಲ, ಕಾಡುನುಡಿ ಬೇರೆಯಲ್ಲ. ಬಂಗಾಳಿಗೂ ಅಧಿಕ ಅಂದಚಂದ, ಸೂಚಕತೆ, ಸತ್ತ್ವ, ಔನ್ನತ್ಯ ಉಂಟೆಂಬುದನ್ನು ಮನವರಿಕೆಯಾಗುವಂತೆ ನಿಸ್ಸಂದೇಹವೆಂಬುವಂತೆ ತೋರಿಸಿಕೊಟ್ಟ ಮುಂದಾಳು ಬಂಕಿಮಚಂದ್ರ. ಆ ಸಾಹಸಕ್ಕೆ ಅವನಲ್ಲಿ ಗಿಡಿದು ತುಂಬಿದ್ದ ಪ್ರಚಂಡ ಪ್ರತಿಭೆ ಒಂದು ಕಾರಣ; ಇನ್ನೊಂದು ತಾಯ್ನುಡಿಯ ಮೇಲಣ ಪೂರ್ಣಭಕ್ತಿ. ಬಂಗಾಳಿ ತನ್ನಿಂದ ಉದ್ದಾರಗೊಂಡಿತು ಎಂಬ ಗರ್ವಭಾವಕ್ಕೆ ಯಾವಾಗಲೂ ಎಡೆಗೊಡದೆ, ತಾನು ಮಾಡುತ್ತಿರುವುದು ಸಜ್ಜನನೊಬ್ಬನ ಕರ್ತವ್ಯ ಎಂಬ ಅಭಿಮತವನ್ನು ಅನುಸರಿಸಿಯೇ ಈತ ನಡೆದುಕೊಂಡ. ಅಲ್ಲದೆ, ಸೃಜನಸಾಹಿತ್ಯ ವಿಮರ್ಶಾ ಸಾಹಿತ್ಯ ವಿಜ್ಞಾನ ಇತಿಹಾಸ ತತ್ತ್ವಶಾಸ್ತ್ರ ಇತ್ಯಾದಿ ವಿಚಾರಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ದೊಡ್ಡ ಮಟ್ಟದ ಧ್ಯೇಯವನ್ನೇ ಪಾಲಿಸಬೇಕೆಂದು ತಾನೂ ಹಟ ಹಿಡಿದಿದ್ದ; ಪರರಿಗೂ ಉಪದೇಶಗೈಯುತ್ತಿದ್ದ, ಅವರ ಕಳಪೆ ಲೇಖನದ ವಿಡಂಬನೆಯ ಮೂಲಕ. ಸಾಹಿತ್ಯೋದ್ಯಮ ಹಗುರ ಹುಡುಗಾಟವಲ್ಲ, ವಿಪುಲ ಹೊಣೆಗಾರಿಕೆಯ ಗಂಭೀರ ವ್ಯವಸಾಯ ಎಂಬುದು ಅವನ ಗಾಢನಂಬಿಕೆಯಾಗಿತ್ತು. ರವೀಂದ್ರನಾಥ ಠಾಕೂರರು ಹೇಳುವಂತೆ, ಬಂಕಿಮಚಂದ್ರ ಎದ್ದು ಬಂದದ್ದು ವಂಗ ಸಾಹಿತ್ಯದಲ್ಲಿ ಸೂರ್ಯೋದಯವಾದಂತಾಯಿತು.
ಕ್ರೌನ್ ಅಷ್ಟಪತ್ರ ಆಕಾರದ ಸುಮಾರು 3,800 ಪುಟಗಳ ಒಂಬತ್ತು ಸಂಪುಟದ ಗ್ರಂಥರಾಶಿ ಬಂಕಿಮಚಂದ್ರನ ಲೇಖನಿಯ ಸಾರಸ್ವತ ಸಂತಾನ. ಉಜ್ಜ್ವಲ ಉತ್ಸಾಹವೂ ವಿಶುದ್ಧ ಶಕ್ತಿಯೂ ಇದ್ದ ಈ ಸಾಹಿತಿಗೆ ದೈನಂದಿನ ಜೀವನದ ಅನುಲ್ಲಂಘ್ಯ ಕಾರ್ಯಭಾರ ಎಂದಿಗೂ ಪ್ರತಿಬಂಧಕವಾಗಲಿಲ್ಲ.

ತನ್ನ ಹದಿನಾಲ್ಕನೆಯ ವಯಸ್ಸಿನಿಂದ ಹದಿನೆಂಟರವರೆಗೆ ಬಂಕಿಮ ಹಲವು ಸಣ್ಣ ಕವನಗಳನ್ನೂ ಎರಡು ನೀಳ್ಗವಿತೆಗಳನ್ನೂ ಬರೆದ; ಅವು ಅಚ್ಚೂ ಆದವು. ಸಾಂಪ್ರದಾಯಿಕ ಕವಿಸಮಯದಿಂದ ತೆಗೆದುಕೊಂಡ ಸಾಮಗ್ರಿಯಲ್ಲದೆ ಮತ್ತೇನನ್ನು ಕೊಡಬಲ್ಲ ಕಿಶೋರಕವಿ? ಈಶ್ವರಚಂದ್ರ ಗುಪ್ತನ ಬುದ್ಧಿವಾದಕ್ಕೆ ತಲೆಬಾಗಿ ಬಂಕಿಮಪದ್ಯ ಬರೆಯುವ ಚಟವನ್ನು ಬಿಟ್ಟುಕೊಟ್ಟ. ಆದರೂ ತಾನು ಸ್ಥಾಪಿಸಿ ಆರು ವರ್ಷ ನಡೆಸಿದ ವಂಗದರ್ಶನ ಎಂಬ ಮಾಸಪತ್ರಿಕೆಗೆ ಪುಟ ತುಂಬಬೇಕಾದ ಸಂದರ್ಭದಲ್ಲಿ ಆಗೊಂದು ಈಗೊಂದು ಪದ್ಯ ಕಟ್ಟುವ ಕೆಲಸವನ್ನು ಹರ್ಷದಿಂದ ಮಾಡುತ್ತಿದ್ದ. ವಂಗದರ್ಶನದೊಂದಿಗೆ ಪ್ರಚಾರ ಎಂಬ ಒಂದು ಪತ್ರಿಕೆಯನ್ನೂ ಬಂಕಿಮಚಂದ್ರ ಕೆಲವು ಕಾಲ ನಡೆಸುತ್ತಿದ್ದುದುಂಟು. ಈ ಎರಡಲ್ಲಿ ಈತನ ಬಹುಪಾಲು ಗ್ರಂಥಗಳು, ಲೇಖನಗಳು ಪ್ರಕಟಗೊಂಡವು.

ಈತನ ಪ್ರಥಮ ಕಾದಂಬರಿ ಇಂಗ್ಲಿಷಿನಲ್ಲಿ ಬರೆದದ್ದು; ಅದರ ಹೆಸರು ರಾಜಮೋಹನ್ಸ್ ವೈಫ್. ಅದನ್ನು 1846ರಲ್ಲಿ ಇಂಡಿಯನ್ ಫೀಲ್ಡ್ ಎಂಬ ಇಂಗ್ಲಿಷ್ ವಾರಪತ್ರಿಕೆ ಧಾರವಾಹಿಯಾಗಿ ಪ್ರಕಟಿಸಿತು. ಡಕಾಯಿತ, ಜಮೀನುದಾರ, ಕೆಟ್ಟದಾರಿಗೆ ಕಾಲಿಡುವ ಯುವಕ, ಧೈರ್ಯದ ಯುವತಿ, ಉಯಿಲಿನ ಹಗರಣ, ಅದನ್ನು ಕದಿಯಲು ಪ್ರಯತ್ನ, ಒಬ್ಬನಿಗೆ ಇಬ್ಬರು ಹೆಂಡತಿಯರು ಮುಂತಾದ ಸಂಗತಿಗಳು ಇಲ್ಲಿ ಬರುವುದನ್ನು ಗಮನಿಸಬೇಕು. ಅವು ವಿವಿಧ ರೂಪದಲ್ಲಿ ಬಂಕಿಮನ ಕಾದಂಬರಿಗಳಲ್ಲಿ ಪುನಃಪುನಃ ಕಾಣಿಸಿಕೊಳ್ಳುತ್ತವೆ. ಕಥಾಸಂವಿಧಾನ ಪತ್ತೇದಾರಿ ಕಥೆಯ ತೆರದಲ್ಲಿದೆ. ಕೆಲವು ಕಾಲದ ತರುವಾಯ ಆ ಕಾದಂಬರಿಯನ್ನು ಇಂಗ್ಲಿಷಿನಿಂದ ಬಂಗಾಳಿಗೆ ಬಂಕಿಮನೇ ತರ್ಜುಮೆಗೊಳಿಸಲು ಆರಂಭಿಸಿ ಏಳು ಅಧ್ಯಾಯ ಮುಗಿಸಿದ. ಅಲ್ಲಿಂದ ಮುಂದೆ ತನ್ನ ಪ್ರಬಂಧ ವಿಮರ್ಶೆ ಕುಶಲ ಪತ್ರಗಳಿಗೆ ಇಂಗ್ಲಿಷನ್ನು ಉಪಯೋಗಿಸಿದನೇ ಹೊರತು ಕಥೆ ಕಾದಂಬರಿಗಳಿಗೆ ಅಲ್ಲ.
ಸುಮಾರು ಇಪ್ಪತ್ತೆರಡು ವರ್ಷದ ಅವಧಿಯಲ್ಲಿ ಬಂಕಿಮನಿಂದ ಹದಿನಾಲ್ಕು ಕಾದಂಬರಿಗಳು ರಚಿತವಾದುವು; ದುರ್ಗೇಶನಂದಿನಿ (1865), ಕಪಾಲಕುಂಡಲೆ (1866?), ಮೃಣಾಲಿನಿ (1869), ವಿಷವೃಕ್ಷ (1872), ಇಂದಿರಾ, ಯುಗಳಾಂಗುರೀಯ, ರಾಧಾರಾಣಿ (1872-72), ರಜನಿ (1873-74), ಕೃಷ್ಣಕಾಂತನ ಉಯಿಲು (1875-77), ಚಂದ್ರಶೇಖರ (1875), ಆನಂದಮಠ (1882), ರಾಜಸೀಮಹ (1882-83), ದೇವೀ ಚೌಧುರಾಣಿ (1884), ಸೀತಾರಾಮ (1857). ಇವುಗಳಲ್ಲಿ ಮೂರು (ಇಂದಿರಾ, ಯುಗಳಾಂಗುರೀಯ, ರಾಧಾರಾಣೀ) ಕಿರು ಕಾದಂಬರಿಗಳು: ಅವನ್ನು ಬಂಕಿಮ ಉಪಕಥೆ, ಕ್ಷುದ್ರ ಕಥೆ ಎಂದು ಕರೆದ. ಹೊಸ ಹೊಸ ಮುದ್ರಣಕ್ಕೆ ಬಂದಾಗಲೆಲ್ಲ ಅವು ಗಾತ್ರದಲ್ಲಿ ಬೆಳೆಯುತ್ತ ಹೋದುವು. ಇಂದಿರಾ 45 ಪುಟಗಳಿಂದ 177 ಕ್ಕೆ ವೃದ್ಧಿಸಿತು. ಹದಿನಾಲ್ಕರಲ್ಲಿ ಆರನ್ನು ಸಾಮಾಜಿಕವೆಂದೂ ಮಿಕ್ಕ ಎಂಟನ್ನು ಐತಿಹಾಸಿಕವೆಂದೂ ವಿಂಗಡಮಾಡುವುದು ವಾಡಿಕೆಯಾಗಿದೆ. ಆದರೆ ಇತಿಹಾಸ ಎಷ್ಟರಮಟ್ಟಿಗೆ ನಿಜಾಂಶದ ಖಚಿತ ಆಧಾರದ ಮೇಲೆ ನಿಂತಿದೆಯೋ ಎಂಬ ವಿಷಯವಾಗಿ ಬಂಕಿಮಚಂದ್ರನಿಗೇ ಬಲವಾದ ಅನುಮಾನವಿತ್ತು. ವಿಭಾವನಾ ಶಕ್ತಿಗೂ (ಇಮ್ಯಾಜಿನೇಷನ್) ಕಾಲೊನಿಕತೆಗೂ (ಫ್ಯಾನ್ಸಿ) ಧಾರಾಳವಾದ ಸ್ವಾತಂತ್ರ್ಯವನ್ನು ದಯಪಾಲಿಸಿ ಕವಿ ಸಮಾಧಾನದಿಂದಿದ್ದ, ಎಲ್ಲ ಕಾದಂಬರಿಗಳಲ್ಲೂ-ರಜನಿ ಒಂದು ವಿನಾ-ಸಮಸ್ತ ಸಂಗತಿಯನ್ನೂ ಬಲ್ಲ ಸರ್ವಜ್ಞ ಗ್ರಂಥಕರ್ತನೇ ಕಥಾನಿರೂಪಕ, ಪಾತ್ರ ಶಿಲ್ಪಿ, ವರ್ಣನಾಪಟು, ವ್ಯಾಖ್ಯಾನಕಾರ. ರಜನಿಯಲ್ಲಿ ಪಾತ್ರಗಳು ತಮ್ಮ ತಮ್ಮ ಕಥೆಯನ್ನು ಹೇಳಿಕೊಳ್ಳುತ್ತವೆ. ಘಟನಾವಳಿಯ ನಿಯೋಜನೆಯಲ್ಲಿ ಅಪೂರ್ವ ವ್ಯಾಪಾರಗಳಿಗೂ ಅನಿರೀಕ್ಷಿತ ಹೊಂದಾಣಿಕೆಗಳಿಗೂ ಮುನ್ಸೂಚನೆಯ ಸ್ವಪ್ನ ಜ್ಯೋತಿಷ್ಯ ಮುಂತಾದುವಕ್ಕೂ ಸಾಕಾದಷ್ಟು ಸ್ಥಾನ ಸಿಕ್ಕಿದೆ. ಪಾತ್ರವರ್ಗದ ಆಗುಹೋಗುಗಳು ಕುತೂಹಲ ಕೆರಳಿಸುತ್ತ ಅಚ್ಚರಿ ಹುಟ್ಟಿಸುತ್ತ ಜರುಗುತ್ತವೆಯಾಗಿ ಪಾತ್ರವಾವುದೋ ತನ್ನ ವಿಶಿಷ್ಟ ವರ್ಚಸ್ಸಿನಿಂದ ಓದುಗರನ್ನು ತಡೆದು ನಿಲ್ಲಿಸುವ ಸಂಭವ ಕಡಿಮೆ. ವರ್ಣನೆಯೆಂದರೆ ಬಂಕಿಮಚಂದ್ರನಿಗೆ ಅತಿಶಯ ಆಸಕ್ತಿ. ಒಂದು ಅಧ್ಯಾಯ ಪೂರ್ತಿ ಕೋಗಿಲೆಗೆ ಮೀಸಲಾಗಿದೆ. ಹಾಗೆಯೇ ಮಾನಸಿಕ ವಿದ್ಯಮಾನಗಳ ವರದಿಗೂ ಆಗಾಗ ಸ್ವಲ್ಪ ಹೆಚ್ಛಾಯಿತೆಂದು ತೋರುವಷ್ಟು ಗಮನ ಸಂದಿದೆ. ಒಟ್ಟಿನಲ್ಲಿ ಒಳ್ಳೆಯ ವ್ಯಕ್ತಿಗಳು ಕಷ್ಟದಿಂದ ಪಾರಾಗಿ ಸುಖ ಪಡೆಯುವಂತೆಯೂ ಒಳ್ಳೆಯವರಲ್ಲದವರು ನಷ್ಟಪಡೆಯುವಂತೆಯೂ ನಿಯಂತ್ರಿಸುವ ಕಾವ್ಯನ್ಯಾಯ ಕವಿಗೆ ಅಚ್ಚುಮೆಚ್ಚು. ಈತನ ಕೃತಿಗಳಲ್ಲಿ ಖಳನಾಯಕರಿಗೆ ಪ್ರವೇಶವಿಲ್ಲವೆಂದೇ ಹೇಳಬೇಕು.

ಬಂಕಿಮಚಂದ್ರನ ಇತರ ಬರೆಹವೂ ಬೇಕಾದಷ್ಟಿದೆ. ಗಮನಾರ್ಹವಾಗಿದೆ. ಅವಹೇಳನಪ್ರಮುಖ ಲೇಖಗಳು ಹದಿನೈದಿವೆ; ಗರ್ದಭ, ಬಾಬು, ಇಂಗ್ಲಿಷಿನ ಸ್ತೋತ್ರ ಮುಂತಾದ ಶಿರೋನಾಮೆಯಿಂದಲೇ ಅವುಗಳ ಸ್ವರೂಪ ಸುವ್ಯಕ್ತ, ಕಮಲಾಕಾಂತ ಎಂಬ ಆಪೀಮುಖೋರ ವಿಕಟಪುರುಷನನ್ನು ಕಲ್ಪಸಿಕೊಂಡು ಅವನ ಮುಖಾಂತರ ಅಣಕಮಾಡಿದ್ದಾನೆ. ಕಮಲಾಕಾಂತನ ದಫ್ತರದಲ್ಲಿ 14, ಪತ್ರಗಳಲ್ಲಿ 5, ಹೇಳಿಕೆ 1-ಈ ಇಪ್ಪತ್ತು ಲಘುಲೇಖನಗಳೂ ಉತ್ತಮ ಹಾಸ್ಯದಿಂದ ಸ್ವಾರಸ್ಯಯುಕ್ತವಾಗಿವೆ. ಅಲ್ಲಿ ಕಲ್ಪನಾಶಕ್ತಿ ಲವಲವಿಕೆಯಿಂದ ಲಾಸ್ಯಗೈಯುತ್ತಿದೆ. ತನ್ನ ಕೃತಿಗಳಲ್ಲೆಲ್ಲ ಇದೇ ಶ್ರೇಷ್ಠವೆಂದು ಬಂಕಿಮಚಂದ್ರ ಬಗೆದಿದ್ದನಂತೆ; ಕೆಲವು ಸ್ನೇಹಿತರ ಅಭಿಪ್ರಾಯವೂ ಅದೇ ಆಗಿತ್ತಂತೆ. ಮುಜಿರಾಮಗುಡನ ಜೀವನ ಚರಿತೆಯೆಂಬ ಹದಿನಾಲ್ಕು ಪರಿಚ್ಛೇದಗಳ ಕಿರು ಹೊತ್ತಗೆಯೂ ಉತ್ಕøಷ್ಟ ವಿಡಂಬನ. ಇವುಗಳಿಂದ ಪ್ರೇರಿತವಾಗಿ ಆಗಿನ ವಂಗ ಸಮಾಜ ಎಷ್ಟು ಮಟ್ಟಿಗೆ ತನ್ನ ಲೋಪದೋಷಗಳನ್ನು ಕಳೆದುಕೊಂಡಿತೆಂದು ನಿರ್ಧರಿಸಲಾಗುವುದಿಲ್ಲವಾದರೂ ಇವುಗಳಲ್ಲಿ ಅಂದಿನ ಸಮಾಜದ ನಿಜ ಚಿತ್ರಣ ಸಿಗುವುದೇನೋ ಖಚಿತ.

ಇದಲ್ಲದೆ ಈತನ ಶ್ರೀಕೃಷ್ಣಚರಿತ್ರೆ, ಧರ್ಮತತ್ವ, ದೇವತತ್ತ್ವ, ಭಗವದ್ಗೀತೆಯ ಟೀಕೆ ಎಂಬ ಪಾಂಡಿತ್ಯಪೂರ್ಣ ಪ್ರಬಂಧಗಳೂ 38 ವಿಮಾರ್ಶಾತ್ಮಕ ಪ್ರಬಂಧಗಳೂ ಬೋಧಪ್ರದವಾಗಿವೆ. ಈತ ಬರೆದ ಕುಶಲಪತ್ರಗಳಲ್ಲಿ ಇಂಗ್ಲೀಷಿನವು 29 ಬಂಗಾಳಿಯವು 8 ಉಪಲಬ್ಧವಾಗಿವೆ; ಅವುಗಳಲ್ಲಿ ಸೂಕ್ತಿಯಂಥ ಅನೇಕ ವಾಕ್ಯಗಳಿವೆ.

1884ರಂದು ಬಂಕಿಮಚಂದ್ರ ಬಂಗಾಳೀ ಸಾಹಿತಿಗಳಿಗೆ ನಿವೇದಿಸಿದ ಬಿನ್ನಹದಿಂದ ಕೆಲವು ಆಯ್ಕೆಗಳು; ದುಡ್ಡಿಗಾಗಿ ಬರೆಯಬೇಡಿ, ಆಗ ಜನರಂಜನೆ ಮಾಡಬೇಕಾಗುತ್ತದೆ; ತಿಳಿಯದ ವಿಷಯಕ್ಕೆ ಕೈಹಾಕಬೇಡಿ; ಸರಳತೆಯೇ ಅಲಂಕಾರಗಳಲ್ಲೆಲ್ಲಾ ಶ್ರೇಷ್ಠವಾದ ಅಲಂಕಾರ; ಅಸತ್ಯ ಅಧರ್ಮ ಅಹಿತ ಆದದ್ದನ್ನು ಬರೆಯಬೇಡಿ, ಅದು ಮಹಾ ಪಾಪ.
(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ